ಪ್ರಕೃತಿಯ ಆರಾಧನೆ ವಿಶ್ವದ ಎಲ್ಲಾ ನಾಗರಿಕತೆಗಳ ಅವಿಭಾಜ್ಯ ಅಂಗವಾಗಿತ್ತು. ಈಗ ಅದು ಭಾರತೀಯ ಸಂಸ್ಕೃತಿಯಲ್ಲಿ ಉಳಿದುಕೊಂಡು ಬಂದಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಸದ್ಯ ಈ ಲೇಖನ ನಮ್ಮ ವೇದ ಉಪನಿಷತ್ತಿನಲ್ಲಿ ಬರುವ ವೃಕ್ಷಗಳ ಬಗ್ಗೆ ಮಾಹಿತಿ ನೀಡಲಿದೆ.
ವಿಶ್ವದ ಅತ್ಯಂತ ಪ್ರಾಚೀನ ಗ್ರಂಥವಾದ ವೇದ ಇಂದು ಉಳಿದಿರುವ ಬೇರೆ ಎಲ್ಲಾ ಗ್ರಂಥಗಳ ರಚನೆಯ ಆಧಾರ. ವೇದವೆಂದರೆ ಜ್ಞಾನ. ಈ ಅತ್ಯಂತ ಪುರಾತನ ಜ್ಞಾನ ಭಂಡಾರ ನೀಡಿರುವ ವೇದ ಋಷಿಗಳಿಗೆ ನನ್ನ ನಮನ. ಭಗವಂತನ ವಾಣಿ ಈ ವೃಕ್ಷಗಳ ಬಗ್ಗೆ ಏನು ಹೇಳುವುದು ?
ಓಂ ಈಶಾವಾಸ್ಯಮಿದಗಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ಇದು ಈಶಾವಾಸ್ಯ ಉಪನಿಷತ್ತಿನ ಮೊದಲನೆಯ ಮಂತ್ರ. ನಮಗೆ ಜಗತ್ತಿನಲ್ಲಿ ಗೋಚರವಾಗುವ ಸಕಲ ವಸ್ತುಗಳು ಈಶ್ವರನಿಂದ ವ್ಯಾಪಿಸಲ್ಪಟ್ಟಿದೆ. ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲೂ ಪರಮಾತ್ಮನಿದ್ದಾನೆ ಎಂದು ತಿಳಿಸುತ್ತದೆ.
ಇದೇ ಉಪನಿಷತ್ತಿನ ಆರನೇ ಮಂತ್ರ ಹೀಗೆ ಇದೆ.
ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನುಪಶ್ಯತಿ|
ಸರ್ವಭೂತೇಶು ಚಾತ್ಮಾನಂ ತತೋ ನ ವಿಜುಗುಪ್ಸೆತೇ ||
ಈ ಜಗತ್ತಿನ ಎಲ್ಲಾ ಜೀವರಾಶಿಗಳನ್ನು ಯಾರು ತಮ್ಮಲ್ಲಿ ನೋಡುತ್ತಾರೋ ಹಾಗೂ ಎಲ್ಲಾ ಜೀವರಾಶಿಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಾರೋ ಅವರು ಅಲ್ಲಿಂದ ನಂತರ ದುಃಖಿಸುವುದಿಲ್ಲ.
ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಮ್ | ಋಗ್ವೇದ ೧೦.೯೦.೧
ನಮಗೆ ಗೋಚರವಾಗುವ ಸಕಲ ಜಗತ್ತಿನಲ್ಲಿ ಮೊದಲಿನಿಂದ ಯಾವುದು ಇತ್ತೋ, ಇಂದು ಯಾವುದು ಇದೆಯೋ ಮುಂದೆ ಯಾವುದು ಬರುವುದೋ ಇವೆಲ್ಲವೂ ಪುರುಷನೆ. ಇದು ಋಗ್ವೇದದ ಪುರುಷ ಸೂಕ್ತದಲ್ಲಿ ಕಂಡು ಬರುವುದು.
ತತೋ ವಿಶ್ವಙವ್ಯಕ್ರಾಮತ್ | ಸಾಶನಾನಶನೇ ಅಭಿ ||
ಪುರುಷ ಸೂಕ್ತ , ಯಜುರ್ವೇದ ತೈತರೀಯ ಆರಣ್ಯಕ ಪ್ರಶ್ನೆ ೩
ಜಗತ್ತಿನ ಚೇತನ ಹಾಗೂ ಅಚೇತನ ಎಲ್ಲವನ್ನು ಪುರುಷನೇ ವ್ಯಾಪಿಸಿರುವನು.
ಸರ್ವಂ ಖಲ್ವಿದಂ ಬ್ರಹ್ಮ ತಜ್ಜಲನಿತಿ ಶಾಂತ ಉಪಾಸೀತ| ಛಾಂದೋಗ್ಯ ಉಪನಿಷತ್ ೩.೧೪.೧
ಎಲ್ಲವೂ ಬ್ರಹ್ಮವೇ
ತಸ್ಮದ್ವಾ ಏತಸ್ಮಾದಾತ್ಮನ ಆಕಾಶಸ್ಸಂಭೂತ: | ಆಕಾಶದ್ವಾಯು: |ವಾಯೋರಗ್ನಿ: | ಆಗ್ನೇರಾಪ: |ಅದ್ಭ್ಯ: ಪೃಥವೀ | ಪೃಥಿವ್ಯಾ ಓಷಧಯ: | ಓಷಧೀಭ್ಭ್ಯೋನ್ನಮ್ | ಅನ್ನಾತ್ ಪುರುಷ: |
ತೈತರೀಯ ಉಪನಿಷತ್ ಬ್ರಹ್ಮಾನಂದವಲ್ಲಿ
ಆತ್ಮನಿಂದಲೇ ಈ ಆಕಾಶವು ಉತ್ಪನ್ನವಾಯಿತು. ಆಕಾಶದಿಂದ ವಾಯು ಉತ್ಪತ್ತಿಯಾಯಿತು. ವಾಯುವಿನಿಂದ ಅಗ್ನಿ ಉತ್ಪತ್ತಿಯಾಯಿತು. ಅಗ್ನಿಯಿಂದ ಜಲ ಉತ್ಪತ್ತಿಯಾಯಿತು. ಜಲದಿಂದ ಪೃಥ್ವಿ ಉತ್ಪತ್ತಿಯಾಯಿತು. ಭೂಮಿಯ ಮೇಲೆ ಬೆಳೆಯುವ ಲತೆಗಳು ಹಾಗೂ ವೃಕ್ಷಗಳು ಉತ್ಪತ್ತಿಯಾಯಿತು. ಸಸ್ಯಗಳಿಂದ ಅನ್ನ ಉತ್ಪತ್ತಿಯಾಯಿತು. ಪುರುಷ ಅನ್ನದಿಂದ ಉತ್ಪನ್ನವಾದನು . ಇದು ಸೃಷ್ಟಿಯ ಕ್ರಮವೆಂದು ತೈತರೀಯ ಉಪನಿಷತ್ ಹೇಳುತ್ತದೆ.
ಇವೆಲ್ಲವೂ ಸೃಷ್ಟಿಯಲ್ಲಿ ಎರಡಿಲ್ಲ ಎಲ್ಲವೂ ಒಂದೇ ಎಂಬ ಏಕತ್ವವನ್ನು ಸೂಚಿಸುತ್ತದೆ. ಶರೀರದಲ್ಲಿ ಬೇದವುಂಟು ಆತ್ಮನಲ್ಲಿ ಅಲ್ಲ. ಮರ ,ಗಿಡ ,ಪ್ರಾಣಿ ,ಪಕ್ಷಿ ,ಮಾನವ ಇವೆಲ್ಲದರಲ್ಲೂ ಇರುವವನು ಅವನೇ. ಪರಮಾತ್ಮನ ಹೊರತು ಬೇರೊಂದು ಇಲ್ಲ. ನಮ್ಮ ಗ್ರಂಥಗಳು ಸೃಷ್ಟಿ ಹಾಗೂ ಸೃಷ್ಟಿಕರ್ತ ಬೇರೆಯಲ್ಲ ಎಂದು ಹೇಳುತ್ತದೆ.
ಈಗ ವೇದ ಹಾಗೂ ಉಪನಿಷತ್ತಿನ ಕೆಲವೊಂದು ಪ್ರಸಿದ್ಧ ಸೂಕ್ತಗಳು ಹಾಗೂ ಮಂತ್ರಗಳಲ್ಲಿ ವೃಕ್ಷಗಳ ಕುರಿತು ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.
ಶ್ರೀ ರುದ್ರ ಪ್ರಶ್ನದಲ್ಲಿ ಬರುವ ವೃಕ್ಷಗಳ ಬಗ್ಗೆ ಕೆಲವೊಂದು ಮಂತ್ರಗಳು.
ಕೃಷ್ಣ ಯಜುರ್ವೇದ , ತೈತ್ತಿರೀಯ ಸಂಹಿತೆ
೪.೫.೧
ಯೇ ವೃಕ್ಷೇಷು ಸಸ್ಪೆಂಜರಾ ನೀಲಗ್ರೀವಾ ವಿಲೋಹಿತಾ: |
ನೀಲಗ್ರೀವರಾದ ತಾಮ್ರವರ್ಣದ ರುದ್ರರು ವೃಕ್ಷಗಳ ಸನ್ನಿಧಿಯಲ್ಲಿದ್ದಾರೆ ಎಂದು ಈ ಮೇಲಿನ ಮಂತ್ರ ತಿಳಿಸುತ್ತದೆ.
ಅತಸ್ಸಮುದ್ರಾ ಗಿರಯಶ್ಚ ಸರ್ವೇಸ್ಮಾತ್ಸ್ಯಂದಂತೇ ಸಿಂಧವ: ಸರ್ವರೂಪಾ: | ಅತಶ್ಚ ವಿಶ್ವಾ ಓಷಧಯೋ ರಸಾಶ್ಚ ಯೇನೈಶ್ಚ ಭೂತಸ್ತಿಷ್ಠಿಂತ್ಯಂತರಾತ್ಮಾ ||
ಪರಮಾತ್ಮನಿಂದಲೇ ಸಮುದ್ರವು ಹುಟ್ಟುವುದು. ಅವನಿಂದಲೇ ಬೆಟ್ಟ , ನದಿಗಳು ಬರುವುದು. ಪರಮಾತ್ಮನಿಂದಲೇ ಸಸ್ಯಗಳು ರಸಗಳು ಅದರೊಡನೆ ಜೀವಾತ್ಮಗಳು ನೆಲೆಸುವುದು.
ನಮೋ ವೃಕ್ಷೇಭ್ಯೋ ಹರಿಕೇಶಭ್ಯ: ಪಶುನಾಂ ಪತಯೇ ನಮೋ |
ಹಸಿರು ಎಲೆಗಳ ವೃಕ್ಷಗಳಿಗೆ ಮತ್ತು ಪಶುಪತಿ ಆದ ರುದ್ರನಿಗೆ ನಮ್ಮ ನಮಸ್ಕಾರ.
ನಮೋ ರೋಹಿತಯಸ್ಥಪತಯೇ, ವೃಕ್ಷಾಣಾಂ ಪತಯೇ ನಮಃ
ಕೆಂಪು ಬಣ್ಣದ ರುದ್ರನಿಗೆ , ವೃಕ್ಷದ ಅಧಿಪತಿಗೆ ನಮಸ್ಕಾರ
ನಮೋ ವನ್ಯಾಯ ಚ ಕಕ್ಷ್ಯಾಯ ಚ
ಕಾಡಿನಲ್ಲಿ ವಾಸವಾಗಿರುವವನು, ಹಾಗೂ ಕಾಡಿನ ಎಲ್ಲಾ ಜೀವರಾಶಿಗಳ ಒಡೆಯನು. ಮರದ ಪೋಟೆರಿಗಳಲ್ಲಿ ವಾಸವಾಗಿರುವ ಎಲ್ಲಾ ಜೀವರಾಶಿಗಳಿಗೂ ಪರಮೇಶ್ವರನ ಸ್ವರೂಪವೇ ಆಗಿದೆ .
ನಮಃ ಪರ್ಣ್ಯಾಯ ಚ ಪರ್ಣಶದ್ಯಾಯ ಚ
ಹಸಿರು ಹಾಗೂ ಒಣಗಿದ ಎಲೆಗಳಲ್ಲಿ ವಾಸವಾಗಿರುವ ಪರಮೇಶ್ವರನಿಗೆ ನಮಸ್ಕಾರಗಳು
ಅಶ್ವತ್ಥ: ಸರ್ವವೃಕ್ಷಾಣಾಂ ದೇವರ್ಷೇಣಾಂ ಚ ನಾರದ: | ಗಂಧರ್ವಣಾಂ ಚಿತ್ರರಥ: ಸಿದ್ಧಾನಾಂ ಕಪಿಲೋ ಮುನಿ: || ಶ್ರೀಮದ್ ಭಗವದ್ಗೀತ ಅಧ್ಯಾಯ ೧೦ , ೨೬ ನೇ ಶ್ಲೋಕ
ಭಗವಂತ ಕೃಷ್ಣನು ಅರ್ಜುನನಿಗೆ ಇನ್ತೆಂದನು ಜಗತ್ತಿನ ಸಮಸ್ತ ವೃಕ್ಷಗಳಲ್ಲಿ ಅಶ್ವಥ ನಾನು, ದೇವರ್ಷಗಳಲ್ಲಿ ನಾರದ, ಗಂಧರ್ವರಲ್ಲಿ ಚಿತ್ರರಥ ಹಾಗೂ ಸಿದ್ದರಲ್ಲಿ ಕಪಿಲಮುನಿ. ಹೀಗೆ ಪರಮಾತ್ಮ ಕೃಷ್ಣ ವೃಕ್ಷಗಳಲ್ಲಿ ಅಶ್ವತ್ಥನ ಮಹತ್ವವನ್ನು ಇಲ್ಲಿ ಸಾರಿದ್ದಾನೆ.
ಇದು ಋಗ್ವೇದದ ರಾತ್ರಿ ಸೂಕ್ತದ ಮಂತ್ರಗಳು
೧೦.೮.೧೨೭
ಓರ್ವಪ್ರಾ ಅಮರ್ತ್ಯ ನಿವಾತೋ ದೇವ್ಯು (ಉ) ದ್ವೈತ: | ಜ್ಯೋತಿಷಾ ಬಾಧತೇ ತಮ: ||
ರಾತ್ರಿ ದೇವಿಯು ಬಹು ವಿಸ್ತಾರವಾದ ಅಂತರಿಕ್ಷವನ್ನು ಕತ್ತಲೆಯಿಂದ ತುಂಬಿರುತ್ತಾಳೆ. ನೆಲದ ಮೇಲಿರುವ ಬಳ್ಳಿಗಳು ಹಾಗೂ ಬಹು ಎತ್ತರವಾದ ಮರಗಳನ್ನು ತನ್ನ ಶೋಭೆಯಿಂದ ( ನಕ್ಷತ್ರಗಳ ಬೆಳಕು) ಆವರಿಸುತ್ತಾಳೆ.
ಸಾ ನೋ ಅದ್ಯ ಯಸ್ಯ ವ್ಯಯಂ ನಿ ತೇ ಯಾಮನ್ನವಿಕ್ಷ್ಮಹಿ | ವೃಕ್ಷೇನ ವಸತಿಂ ವಯ: ||
ಯಾವ ರೀತಿ ರಾತ್ರಿ ವೇಳೆಯಲ್ಲಿ ಹಕ್ಕಿಗಳು ವೃಕ್ಷವನ್ನು ಆಶ್ರಯಿಸುತ್ತವೋ , ಹಾಗೆಯೇ ನಾವು ಸಹ ರಾತ್ರಿ ವೇಳೆ ಮನೆಯಲ್ಲಿರುತ್ತೇವೆ.
ಆ ಯೋ ಯೋನಿಂ ದೇವಕೃತಂ ಸಸಾದ ಕೃತ್ವಾ ಹ್ಯ (ಅ) ಗ್ನಿರಮೃತಾ ಅತಾರೀತ | ತಮೋಷಧೀಶ್ಚ ವನಿನಶ್ಚ ಗರ್ಭಂ ಭೂಮಿಶ್ಚ ವಿಶ್ವಧಾಯಸಂ ಬಿಭರ್ತಿ || ಋಗ್ವೇದ ೭.೪.೫
ಯಾವ ಕಾರಣಕ್ಕಾಗಿ ಅಗ್ನಿಯ ತನ್ನ ಪ್ರಜ್ಞೆಯಿಂದ, ದೇವತೆಗಳನ್ನು ಕಷ್ಟದಿಂದ ಬಿಡಿಸುವವನೋ ಹಾಗೆ ದೇವತೆಗಳಿಂದ ನಿರ್ಮಿತವಾದ ಸ್ಥಾನವನ್ನು ಆಶ್ರಯಿಸಿದ್ದಾನೋ ಅಂತ ವಿಶ್ವಧಾರಕನಾದ ಅಗ್ನಿಯನ್ನು ಓಷಧಿಗಳು, ವೃಕ್ಷಗಳು ಗರ್ಭ ರೂಪದಲ್ಲಿ ಧರಿಸುತ್ತವೆ. ಹಾಗೆಯೇ ಪೃಥ್ವಿಯು ಅನುಸರಿಸುತ್ತದೆ.
ಕಥಾ ಮಹೇ ರುದ್ರಿಯಾಯ ಬ್ರವಾಮ ಕದ್ರಾಯೇ ಚಿಕಿತುಷೇ ಭಗಾಯ | ಆಪ ಓಷಧೀರುತ ನೋSವಂತು ದ್ಯೌರ್ವಾನಾ ಗಿರಿಯೋ ವೃಕ್ಷಕೇಶಾ : ||
ಋಗ್ವೇದ ೫.೪೧.೧೧
ಧನಸಂಪತ್ತುಗಳಿಸಲು ರುದ್ರ ಪುತ್ರರಾದ ಮರುತ್ ಗಣಗಳಿಗೆ ಹೇಗೆ ಪ್ರಾರ್ಥಿಸೋಣ. ಸರ್ವಜ್ಞನಾದ ಭಗನನ್ನು ಹೇಗೆ ಸ್ತುತಿಸೋಣ. ಜಲರಾಶಿಗಳು, ಓಷಧಿಗಳು, ಸ್ವರ್ಗಲೋಕದ ಅಧಿಪತಿ , ಕೇಶಗಳುಳ್ಳ ವೃಕ್ಷವಂತೇ ಕಾಣುವ ಪರ್ವತಗಳು , ವನಗಳು ನಮ್ಮನ್ನ ರಕ್ಷಿಸಲಿ.
ಅವ ಸೃಜಾ ವನಸ್ಪತೇ ದೇವ ದೇವೇಭ್ಯೋ ಹವಿ: | ಪ್ರ ದಾತುರಸ್ತು ಚೇತನಮ್ || ಋಗ್ವೇದ ೧.೧೩.೧೧
ವನಸ್ಪತಿ ಎಂಬ ಹೆಸರಿನ ಅಗ್ನಿಯೇ , ದೇವತೆಗಳಿಗೆ ನಾವು ಕೊಟ್ಟಂತಹ ಹವಿಸನ್ನು ಸಮರ್ಪಿಸು . ಹವಿಸನ್ನು ಕೊಡುವ ಯಜಮಾನನಿಗೆ ಉತ್ತಮ ಜ್ಞಾನವು ಉಂಟಾಗಲಿ.
ಅಶ್ವತ್ಥೇ ವೋ ನಿಷದನಂ ಪರ್ಣೇ ವೋ ವಸತಿಷ್ಕೃತಾ | ಗೋಭಾಜ ಇತ್ಕಿಲಾಸಥ ಯತ್ಸನವಥ ಪೂರುಷಮ್ || ಋಗ್ವೇದ ೧೦.೯೭.೫
ಎಲೈ ಓಷಧೀದೇವತೆಗಳೇ ನಿಮ್ಮ ವಸತಿಯು ಅಶ್ವತ್ಥ ವೃಕ್ಷದಲ್ಲಿಯೂ, ನಿಮ್ಮ ವಾಸ ಸ್ಥಾನವು ಪಲಶದಲ್ಲಿ( ಮುತ್ತುಗ) ಸ್ಥಾಪಿತ ಆಗಿದೆ.
ಊರ್ಧ್ವಮೂಲಮಧ:ಶಾಖಮಶ್ವತ್ಥಂ ಪ್ರಾಹುರವ್ಯಯಮ್ | ಛಂದಾಂಸಿ ಯಸ್ಯ ವೇದ ಸಾ ವೇದವಿತ್ || ಭಗವದ್ಗೀತಾ ಅಧ್ಯಾಯ ೧೫ , ಶ್ಲೋಕ ೧
ಬೇರುಗಳು ಮೇಲ್ಮುಖವಾಗಿ , ಅಂದರೆ ಅತ್ಯುತ್ತಮವಾಗಿರುವದರಿಂದ ಉತ್ಕೃಷ್ಟ ಸ್ಥಾನದಲ್ಲಿ ಪರಬ್ರಹ್ಮನು ಮೂಲ ಹಾಗೆ ಶಾಖೆಗಳು ಕೆಳಮುಖವಾಗಿ ಅಂದರೆ ನಿಕೃಷ್ಟ ಸ್ಥಾನದಲ್ಲಿ ಇರುವುದು ಮಹತ್ತು ಅಹಂಕಾರ ಮೊದಲಾದವು . ಎಲೆಗಳು ಛಂದಸ್ಸುಗಳು ಅಂದರೆ ಋಗ್ವೇದಾದಿ ವೇದಗಳು ಕರ್ಮವೆಂದು . ಆತ್ಮಜ್ಞಾನಿಗಳಾದವರಿಗೆ ನಾಳೆಯವರೆಗೂ ನಿಲ್ಲದೆ ಇರುವುದಾಗಿಯೂ, ಅಜ್ಞಾನಿಗಳಾದವರಿಗೆ ಅಕ್ಷಯ ವಾಗಿಯೂ ಇರುವ ಈ ಸಂಸಾರ ವೃಕ್ಷವನ್ನು ಯಾವನು ತಿಳಿದಿರುವವನು ಅವನೇ ವೇದವನ್ನು ತಿಳಿದವನು ಬ್ರಹ್ಮ ತತ್ವವನ್ನು ತಿಳಿದವನು.
ದ್ವಾ ಸುಪರ್ಣಾ ಸಯುಜಾ ಸಮಾನಂ ವೃಕ್ಷಂ ಪರಿಷಸ್ವಜಾತೇ | ತಯೋರನ್ಯ: ಪಿಪ್ಪಲಂ ಸ್ವಾದ್ವತ್ತ್ಯ ನಶ್ನನ್ನನ್ಯೋsಭಿಚಾಕಶೀತಿ || (೧)
ಸಮಾನೇ ವೃಕ್ಷೇ ಪುರುಷೋ ನಿಮಗ್ನೋsನೀಶಯಾ ಶೋಚತಿ ಮುಹ್ಯಮಾನ: | ಜುಷ್ಟಂ ಯದಾ ಪಶ್ಯತ್ಯನ್ಯಮೀಶಮಸ್ಯ ಮಹಿಮಾನಮಿತಿ ವೀತಶೋಕ: || (೨)
ಮುಂಡಕೋಪನಿಷತ್ತು ಮೂರನೆಯ ಮುಂಡಕ ಓಂದನೆಯ ಖಂಡ
ಸದಾ ಜೊತೆಯಲ್ಲಿ ಇರುವ ಹಾಗೂ ಗೆಳೆಯರಾಗಿರುವ ಎರಡು ಸೂಪರ್ಣ/ಪಕ್ಷಿಗಳು ಒಂದೇ ವೃಕ್ಷವನ್ನು ಆಶ್ರಯಿಸಿಕೊಂಡಿವೆ. ಇವುಗಳಲ್ಲಿ ಒಂದು ಪಕ್ಷಿ ಅರಳಿಮರದ ಹಣ್ಣನ್ನು ತಿನ್ನುತ್ತಿದೆ ಮತ್ತೊಂದು ತಿನ್ನದೇ ನೋಡುತ್ತಿದೆ. ಇಲ್ಲಿ ಹಕ್ಕಿಗಳು ಅಂದರೆ ಒಂದೇ ಶರೀರದಲ್ಲಿರುವ , ಶರೀರವೇ ತಾನು ಎಂದುಕೊಂಡಿರುವ ಅಂದ್ರೆ ಕತೃತ್ವ ಭಾವ ಹೊಂದಿರುವ ಜೀವಾತ್ಮ ಹಾಗೂ ಕತ್ತುತ್ವ ಭಾವವನ್ನು ಕಳೆದುಕೊಂಡಿರುವ ಶುದ್ಧ ಚೈತನ್ಯ ಆತ್ಮ. ಇಲ್ಲಿ ಶರೀರವನ್ನು ವೃಕ್ಷಕ್ಕೆ ಹೋಲಿಸಲಾಗಿದೆ. ಓರ್ವ ತನ್ನ ಅಜ್ಞಾನದಿಂದ ಮಾಡಿರುವ ಕರ್ಮದ ಫಲವನ್ನು ತಿನ್ನುತ್ತಾನೆ ಸವಿಯುತ್ತಾನೆ. ಮತ್ತೊಬ್ಬ ತಿನ್ನದೇ ನಿತ್ಯ ಶುದ್ಧನಾಗಿ ಸ್ವಸ್ಸ್ವರೂಪವಾಗಿ ಸರ್ವಜ್ಞನಾದ ಶುದ್ಧ ಚೈತನ್ಯ. ಒಂದೇ ಆತ್ಮನ ಜ್ಞಾನ ಹಾಗೂ ಅಜ್ಞಾನದ ಹಂತವಾಗಿವೇ ಈ ಎರಡು ಹಕ್ಕಿಗಳು. ಈ ವೃಕ್ಷದಲ್ಲಿ ಪುರುಷನು ನಿಮಗ್ನನಾಗಿ ಅಶಕ್ತ ಭಾವದಿಂದ ಶೋಕಿಸುತ್ತಿರುವನು. ಭಜಿಸಲ್ಪಟ್ಟ ತನಗಿಂತ ಬೇರೆ ಯಾದ ಈಶ್ವರನು ಮತ್ತು ಅವನ ಮಹಿಮೆಯನ್ನು ಹೀಗೆಂದು ಯಾವಾಗ ಕಂಡುಕೊಳ್ಳುವನು ಆಗ ಶೋಕದಿಂದ ದೂರನಾಗುವನು. ನಾನು ನನ್ನದು ಎನ್ನುವ ಕರ್ಮದ ಅಂಟಿನಿಂದ ಇರುವವನು ,ದುಃಖದಿಂದ ಇರುತ್ತಾನೆ. ತಾನು ಈ ವೃಕ್ಷನಿಂದ ಬೇರೆ ಯಂದು ಅಂದರೆ ಶರೀರನಿಂದ ಬೇರೆ ಎಂದು ತಿಳಿದಾಗ ಶೋಕದಿಂದ ಬಿಡುಗಡೆಯಾಗುತ್ತಾನೆ ಅಥವಾ ಮಾಯೆಯಿಂದ ಮುಕ್ತನಾಗುತ್ತಾನೆ.
ನಮ್ಮ ಗ್ರಂಥಗಳಲ್ಲಿ ವೃಕ್ಷವನ್ನು ಕೇವಲ ಒಂದು ಜೀವಿಯಾಗಿ ಅಲ್ಲ ಆದರ ಜೊತೆಗೆ ಜಗತ್ತೆಂಬ ಮಾಯೆಯನ್ನು ಭೇದಿಸುವ ಒಂದು ಶಸ್ತ್ರವಾಗಿ ಬಳಸಲಾಗಿದೆ. ಹೀಗೆ ವೇದ , ಉಪನಿಷತ್ ಹಾಗೂ ಭಗವದ್ಗೀತೆಯಲ್ಲಿ ಇನ್ನೂ ಹಲವಷ್ಟು ವೃಕ್ಷಗಳ ಬಗ್ಗೆ ಕುರಿತು ಮಂತ್ರಗಳಿವೆ. ಆದರೆ ಇಲ್ಲಿ ಕೆಲವೊಂದು ಮಂತ್ರಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ನಮ್ಮ ಪ್ರಾಚೀನ ಭಾರತೀಯ ನಾಗರಿಕತೆ ಪ್ರಕೃತಿಯನ್ನು ಬಹಳ ವಿಶೇಷವಾಗಿ ಪೂಜಿಸುತ್ತಿದ್ದರೂ. ಬನ್ನಿ ನಾವೆಲ್ಲರೂ ಸೇರಿ ನಮ್ಮ ಮನೆಯ ಅಂಗಳಗಳಲ್ಲಿ ಗಿಡಮರಗಳನ್ನು ಬೆಳೆಸೋಣ.
ಸಂಕಲನ ಅಜಯ್ ಬೋನ್ಸಾಯ್ ಮನೆ
ಕೆಲವ ಮಂತ್ರಗಳ ಅನುವಾದಕ್ಕಾಗಿ ಈ ಪುಸ್ತಕಗಳು ಸಹಾಯಕಾರಿ ಯಾಗಿವೆ
ಈಶಾವಾಸ್ಯ ಉಪನಿಷತ್ ವ್ಯಾಖ್ಯಾನ ಸ್ವಾಮಿ ಚಿನ್ಮಯಾನಂದ
ಮುಂಡಕೋಪನಿಷತ್ತು ವ್ಯಾಖ್ಯಾನ ಸ್ವಾಮಿ ಚಿನ್ಮಯಾನಂದ
ಮುಂಡುಕೋಪನಿಷತ್ತು ಬರೆದವರು ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ತೈತ್ತಿರೀಯೋಪನಿಷತ್ ವ್ಯಾಖ್ಯಾನ ಸ್ವಾಮಿ ಚಿನ್ಮಯಾನಂದ
ಶ್ರೀ ದುರ್ಗಾ ಸಪ್ತಶತೀ ಸ್ವಾಮಿ ಹರ್ಷಾನಂದ
ಪುರುಷಸೂಕ್ತ ಭಾಷ್ಯ ಆಧ್ಯಾತ್ಮಪ್ರಕಾಶ ಕಾರ್ಯಾಲಯ
ಗೀತಾರ್ಥಬೋಧಿನೀ ಶ್ರೀ ಶಂಕರಾನಂದಭಾರತಿ



