Blog

ಹೇ ಮರವೇ

                                                 ಹೇ ಮರವೇ, ನೀ ಎನ್ನ ಗುರುವೇ                24 – 07 – 2019

 

ನಿನ್ನ ಎಲೆಗಳ ನಡುವಿನ ಬೆಳಕನ್ನು ಕಂಡು ಅನುಭವಿಸಿದೆ ದೈವ  ತೇಜಸ್ಸನ್ನು

ನಿನ್ನ ಎಲೆಗಳ ಶಬ್ದವನ್ನು ಕೇಳಿ ಅನುಭವಿಸಿದೆ ದೈವ ವಾಣಿ ಯನ್ನು

ಬಾನಲ್ಲಿನ ರಶ್ಮಿಯನ್ನು ಹಿಡಿದು ನೀ ಕೊಟ್ಟೆ ನೆರಳನ್ನು, ನಾ ಅನುಭವಿಸಿದೆ ದೈವ ಸಾನಿಧ್ಯವನ್ನು

ನಿನ್ನ ಗಾಳಿಯ ಪರಿಮಳದಿ ಅನುಭವಿಸಿದೆ ದೈವ ಸುಗಂಧವನ್ನು

ನಿನ್ನ ಅಪ್ಪಿಕೊಂಡು ನಾನು ಅನುಭವಿಸಿದೆ ಜೇವನ್ ಮುಕ್ತಿಯನ್ನು

ಹೇ ಮರವೇ, ನೀ ಎನ್ನ ಗುರುವೇ

 

ಸಹಸ್ರ ಕೋಟಿ ವರ್ಷಗಳನ್ನು ನೀ ಕಂಡಿರುವೆ, ಸಹಸ್ರ ಮಳೆಯ ನೀರನ್ನು ನೀ ಕುಡಿದಿರುವೆ

ಸಹಸ್ರ ಕಿರಣಗಳನ್ನು ನೀ ನೋಡಿರುವೆ, ಸಹಸ್ರ ಜೀವಿಗಳನ್ನು ನೀ ಹೊಂದಿರುವೆ

ಸಹಸ್ರ ಕವಿಗಳಿಗೆ ನೀ ಸ್ಫೂರ್ತಿಯಾಗಿರುವೆ, ಸಹಸ್ರ ಕಿವಿಗಳಿಗೆ ನೀ ಹಾಡಾಗಿರುವೆ

ಇಷ್ಟಿದ್ದರೂ ನೀ ನನ್ನದಾಗಿರುವೆ

ಹೇ ಮರವೇ, ನೀ ಎನ್ನ ಗುರುವೆ

 

ಮೊದಲು ನಿನ್ನನ್ನು ಹಿಡಿಯುವುದು ಮಣ್ಣು, ನೀ ಬೆಳೆದ ನಂತರ ನೀನೇ ಹಿಡಿಯುವೆ ಮಣ್ಣನ್ನು

ಇದೇ ಆಗಿತ್ತು ನೀ ಕಲಿಸಿದ ಮೊದಲನೆಯ ಪಾಠ, ಬಿಡಬೇಡ ಎಂದಿಗೂ ನಿನ್ನ ಹೆತ್ತವರ ಒಡನಾಟ

ಅಪ್ಪ ಅಮ್ಮನಿಗೆ ಮೊದಲು ನಾವೇ ಮಕ್ಕಳು , ಅವಿರಿಗೆ ವಯಸ್ಸಾದ ಮೇಲೆ ಅವರೇ ನಮ್ಮ ಮಕ್ಕಳು  ,

ಮಕ್ಕಳಿಗೆ ಮಾಡುವ ನಿಸ್ವಾರ್ಥ ಸೇವೆಯೇ ಭಗವಂತನ ನಿಜ ಸೇವೆ,  

ಹೇ ಮರವೇ, ನೀ ಎನ್ನ ಗುರುವೆ

 

ನಿನ್ನ ವಿಶಾಲ ಅಂಗಳದಲ್ಲಿ ಕೊಡುವೆ ಎಲ್ಲಾ ಜೀವಿಗಳಿಗೂ ಅಭೇದ ಆಶ್ರಯ

ಇದೇ ಆಗಿತ್ತು ನೀ ಕಲಿಸಿದ ಎರಡನೇ ಪಾಠ, ಸರ್ವರೂ ಜನಾರ್ದನರು ಅವರಲ್ಲಿ ನೀ ಕಾಣ ಬೇಡ ಬೇಧ

ಜೀವನ ಕ್ಷಣಿಕ , ಮೇಲು ಕೀಳು ಎಂಬುದು ಭ್ರಮೆ , ಇದನ್ನು ತ್ಯಜಿಸುವುದೇ ಮಾನವ ಧರ್ಮ

ಹೇ ಮರವೇ, ನೀ ಎನ್ನ ಗುರುವೇ

 

ಸಮಯಕ್ಕೆ ಶರಣಾಗಿ ಉದುರುಸಿದೆ ನಿನ್ನ ಎಲೆಗಳನ್ನು, ಆ ಸಮಯವೇ ನಿನಗೆ ಶರಣಾದಾಗ ನೀ ಕೊಟ್ಟೆ ಹೊಸ ಚಿಗುರನ್ನು 

ಇದೇ ಆಗಿತ್ತು ನೀ ಕಲಿಸಿದ ಮೂರನೇ ಪಾಠ, ಕ್ಲೇಶವನ್ನು ಸಮಯಕ್ಕೆ ಅನುಭವಿಸಲು ಬಿಡು

ಸಮಯ ಎಂಬ ಅಂತಃ ಕಾಲ ಎಲ್ಲವನು ಬದಲಿಸುವದು ನಾವು ಅದಕ್ಕೆ ಸಾಕ್ಷಿಯಾದರೆ ಸಾಕು  

ಹೇ ಮರವೇ, ನೀ ಎನ್ನ ಗುರುವೇ

 

ಉದುರಿ ಒಣಗಿದ ಎಲೆಯು ಕೂಡ ಕೊಡುವುದು ನಿನಗೆ ಬಲ, ಈ ಬಲದಿ ನೀ ಬೆಳೆಯುವೆ ಇನ್ನೂ ಎತ್ತರ

ಇದೇ ಆಗಿತ್ತು ನೀ ಕಲಿಸಿದ ನಾಲ್ಕನೇ ಪಾಠ, ಎಲ್ಲದರಲ್ಲೂ ಇರುವುದು ಸೃಷ್ಟಿಯ ಶಕ್ತಿ

ಇಲ್ಲಾ ಭುವಿಯಲಿ ಯಾವುದೂ ವ್ಯರ್ಥ, ಕಾರಣ ಇಲ್ಲದೆ ಸೃಷ್ಟಿಯೇ ಇಲ್ಲಾ

ಹೇ ಮರವೇ, ನೀ ಎನ್ನ ಗುರುವೆ

 

ಶೂನ್ಯದ ಭೂಮಿಯಲ್ಲಿ ಹುಟ್ಟಿ ನೀ ಬೆಳವೆ , ತಿಳಿಯದು ನಿಜವಾಗಿಯೂ ನೀ ಹೇಗೆ ಬರುವೆ

ಇದೇ ಆಗಿತ್ತು ನೀ ಕಲಿಸಿದ ಐದನೆಯ ಪಾಠ, ಏನು ಇಲ್ಲದೆ ಬರುವುದೇ ಆರಂಭ

ಇದೇ ಜೀವನದ ಮೊದಲ ಪ್ರಾರಂಭ

ಹೇ ಮರವೇ, ನೀ ಎನ್ನ ಗುರುವೆ

 

ಬರುವುದು ಬೇಸಿಗೆ, ವಸಂತ ,ಮುಂಗಾರುಗಳ ಕಾಲ, ನಿನ್ನ ಸಹನೆಗೆ ನಿದರ್ಶನ ಪ್ರಕೃತಿಯ ಜಾಲ 

ಇದೇ ಆಗಿತ್ತು ನೀ ಕಲಿಸಿದ ಆರನೆಯ ಪಾಠ, ತಾಳ್ಮೆ ಎಂಬ ಅಸ್ತ್ರವೇ ಮಾಯೆಗೆ ಪ್ರತಿ ಅಸ್ತ್ರ

ಕಷ್ಟ, ಸುಖ, ಅಳು.ನಗು ಯಾವುದು ಶಾಶ್ವತವಲ್ಲ,  

ಎಂತಹ ಸಂಧರ್ಭದಲ್ಲೂ ಆತ್ಮ ಸ್ಥಿರತೆ ಕಳೆದುಕೊಳ್ಳದೆ ಸ್ಥಿತ ಪ್ರಜ್ಞೆಯಿಂದಿರಬೇಕು

ಹೇ ಮರವೇ, ನೀ ಎನ್ನ ಗುರುವೆ

 

ನೀ ಕೊಡುವ ಉಸಿರಿಗೆ ನಿನಗೆ ನಾ ಕೊಡುವೆ ನನ್ನ ಜೀವ

ನೀನೆ ತಾನೆ ಜಗದ ನಂಟು ಮುಗಿದ ಮೇಲು ಬರುವ ಅನಂತ ನಿಜ ಗೆಳೆಯ 

ಭಸ್ಮವಾದರೂ ನೀರಲ್ಲಿ ನಾ ನಿನ್ನ ಬಳಿ ಬರುವೆ , ಮಣ್ಣಾದರು ನಿನ್ನ ಒಳಗೆ ನಾ ಬಂದು ಸೇರುವೆ 

ನಿನ್ನ ಉಸಿರಿನ ಜೊತೆಗೆ ನನ್ನ ಉಸಿರು ಸೇರಿ ಪ್ರಕೃತಿ ಹಸಿರಾಗಿರುವುದು ಸದಾ 

ಹೇ ಮರವೇ, ನೀ ಎನ್ನ ಗುರುವೆ

 

ಅಜಯ್. ಎಚ್

ಬೋನ್ಸಾಯ್ ಮನೆ    ಬೆಂಗಳೂರು

 

Leave a Reply

Your email address will not be published. Required fields are marked *